ನಯಚಂದ್ರಸೂರಿ
15ನೆಯ ಶತಮಾನದ ಒಬ್ಬ ಜೈನ ಸಂಸ್ಕøತ ಗ್ರಂಥಕಾರ. ಕೃಷ್ಣಗಚ್ಛದ ಜಯಸಿಂಹ ಸೂರಿಯ ಪರಂಪರೆಯವ. ಹಮ್ಮೀರ ಕಾವ್ಯ ಈತನ ಪ್ರಸಿದ್ಧ ಗ್ರಂಥ. ತೋಮರರ ರಾಜಾಸ್ಥಾನದಲ್ಲಿದ್ದು ಅದನ್ನು ಬರೆದುದಾಗಿ ತಿಳಿಯುತ್ತದೆ. ಅದು 14 ಸರ್ಗಗಳ ಒಂದು ಐತಿಹಾಸಿಕ ಕಾವ್ಯ. ಹಮ್ಮೀರ ಎಂಬ ವೀರನೊಬ್ಬನ ವೀರಸಾಹಸಗಳನ್ನು ವರ್ಣಿಸುತ್ತದೆ. ಹಮ್ಮೀರ ಮಹಮ್ಮದೀಯರೊಂದಿಗೆ ಘೋರ ಯುದ್ಧ ಮಾಡಿ ಸತ್ತ. ಆತ, ಆತನ ರಾಣಿಯರು ಮತ್ತು ಮಕ್ಕಳುಗಳ ದಾರುಣ ಮರಣವನ್ನು ಕವಿ ಬಹು ಸೊಗಸಾಗಿ ಚಿತ್ರಿಸಿದ್ದಾನೆ. ರಜಪೂತ ಹೆಣ್ಣುಮಕ್ಕಳು ಮಹಮ್ಮದೀಯರ ಕೈವಶವಾಗದೆ ಜೋಹರ್ ಪದ್ಧತಿಯನ್ನನ್ನುಸರಿಸಿ ಚಿತೆ ಏರಿದುದನ್ನು ಹೃದಯವಿದ್ರಾವಕವಾಗಿ ವರ್ಣಿಸಲಾಗಿದೆ. ಕಾವ್ಯದಲ್ಲಿ ಶೃಂಗಾರ, ವೀರ ಹಾಗೂ ಅದ್ಭುತ ರಸಗಳು ಚೆನ್ನಾಗಿ ಬಂದಿವೆ. ಶ್ರೀಹರ್ಷನ ವಿಕ್ರಮ ಮತ್ತು ಜೈನಕವಿ ಅಮರಚಂದ್ರನ ಲಾಲಿತ್ಯ ಕೃತಿಯಲ್ಲಿ ಸಂಗಮಿಸಿ ನಿಂತಿವೆ. ಅಲ್ಲಾ-ಉದ್-ದೀನ್ ಖಿಲ್ಜಿ ಹಾಗೂ ರಜಪೂತ ದೊರೆ ಕ್ಷೇತ್ರಸಿಂಹ ಇವರ ಈ ಕಾವ್ಯದಲ್ಲಿನ ಐತಿಹಾಸಿಕ ವ್ಯಕ್ತಿಗಳೆಂದು ಕೆಲವರು ಗುರುತಿಸಿದ್ದಾರೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ